ಹೈದರಾಬಾದ್, ಸೆಪ್ಟೆಂಬರ್ 3: ಎಡಭಾಗದ ಮೂತ್ರಪಿಂಡದಲ್ಲಿ ಗಡ್ಡೆ ಹೊಂದಿದ್ದ 62 ವರ್ಷದ ವ್ಯಕ್ತಿಯೊಬ್ಬರಿಗೆ ರೋಬೋಟಿಕ್ ನೆರವಿನ ರಾಡಿಕಲ್ ನೆಫ್ರೆಕ್ಟಮಿಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಅಮೋರ್ ಆಸ್ಪತ್ರೆಗಳು ಘೋಷಿಸಿವೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಬೇಗನೆ ಚೇತರಿಸಿಕೊಂಡಿದ್ದು, ಮೂರನೇ ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬಂದ ರೋಗಿಯನ್ನು ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಡಭಾಗದ ಕಿಡ್ನಿಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ವೈದ್ಯಕೀಯ ಪರೀಕ್ಷೆಗಳು ಮತ್ತು ಪ್ರಾಥಮಿಕ ಮೌಲ್ಯಮಾಪನದ ನಂತರ, ಟ್ಯೂಮರ್ ಹೊಂದಿರುವ ಮೂತ್ರಪಿಂಡವನ್ನು ತೆಗೆದುಹಾಕಲು ವೈದ್ಯಕೀಯ ತಂಡವು ರೋಬೋಟಿಕ್ ಲೆಫ್ಟ್ ರಾಡಿಕಲ್ ನೆಫ್ರೆಕ್ಟಮಿಯನ್ನು ನಡೆಸಿತು.ಕನ್ಸಲ್ಟೆಂಟ್ ಆಂಕೊಲಾಜಿಸ್ಟ್, ಅಡ್ವಾನ್ಸ್ಡ್ ಲ್ಯಾಪ್ರೊಸ್ಕೋಪಿಕ್ ಮತ್ತು ರೊಬೊಟಿಕ್ ಸರ್ಜನ್ ಡಾ.ಕಲ್ಯಾಣ್ ವಂಗರ ಮಾತನಾಡಿ, 'ಮೇಕ್ ಇನ್ ಇಂಡಿಯಾ' ಎಸ್‌ಎಸ್‌ಐ ಮಂತ್ರ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಸಹಾಯದಿಂದ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರಿಯಾದ ರೋಗಿಯ ಆಯ್ಕೆಯೊಂದಿಗೆ, ರೋಬೋಟಿಕ್ ವಿಧಾನವು ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಸಣ್ಣ ಛೇದನ ಮತ್ತು ಹೆಚ್ಚಿನ ನಿಖರತೆಯೊಂದಿಗೆ ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಅಮೋರ್ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕಿಶೋರ್ ರೆಡ್ಡಿ ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ರೋಗಿಗಳಿಗೆ ಕೈಗೆಟಕುವ ದರದಲ್ಲಿ ತಲುಪಿಸುವ ಗುರಿ ಹೊಂದಲಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಡಾ.ಪೂಜಿತಾ ಯಲ್ಲ, ಅರಿವಳಿಕೆ ತಜ್ಞ ಡಾ.ಜಗದೀಶ್ ಮತ್ತು ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಡಾ.ಪ್ರತ್ಯೂಷಾ ನೇತೃತ್ವದ ತಂಡ ಸಹಕರಿಸಿದೆ ಎಂದು ಆಸ್ಪತ್ರೆ ಬಹಿರಂಗಪಡಿಸಿದೆ.ಕಾರಣ ತಿಳಿಯದೇ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಂಡರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುತ್ತಾರೆ.






